ನೊಗುಚಿ, ಹಿಡೆಯೊ
1876-1928. ಅಮೆರಿಕ ರಾಕ್‍ಫೆಲ್ಲರ್ ಪ್ರತಿಷ್ಠಾನದಲ್ಲಿ ಪ್ರಯೋಗ ವ್ಯಾಸಂಗಗಳನ್ನು ಕೈಗೊಂಡು ಅಂತಾರಾಷ್ಟ್ರೀಯ ಪ್ರಖ್ಯಾತಿ ಪಡೆದ ಏಕಾಣುವಿಜ್ಞಾನಿ. ಈತ ಜಪಾನ್ ರಾಷ್ಟ್ರೀಯ. ಜಪಾನಿನ ಹೊನ್‍ಶು ದ್ವೀಪದ ಸಂಗೋಜಾತ ಎಂಬಲ್ಲಿ ಬಡ ರೈತತಂದೆ. ನಿರಕ್ಷರಕುಕ್ಷಿ ಆದರೆ ಕಾರ್ಯ ಸಾಮಥ್ರ್ಯವಂತೆ ತಾಯಿಯ ಎರಡನೆಯ ಮಗನಾಗಿ 1876ನೆಯ ನವೆಂಬರ್ 24ರಂದು ಜನಿಸಿದ. ಹುಟ್ಟುಹೆಸರು ಸೆಯ್‍ಸಾಕು. ಶೈಶವದಲ್ಲಿ ಸುಡುಗಾಯದಿಂದ ಇವನ ಎಡಗೈ ಊನವಾಯಿತು. ಹತ್ತಿರದ ವಿದ್ಯಾಶಾಲೆಗಳಲ್ಲಿ ಓದಿ ಬುದ್ಧಿವಂತ ಎನ್ನಿಸಿಕೊಂಡ. ಹದಿನೇಳನೆಯ ವಯಸ್ಸಿನಲ್ಲೇ ಪ್ರೌಢವಿದ್ಯಾರ್ಥಿ ಪದವಿಯನ್ನು ಗಳಿಸಿದ. ಸ್ಥಳೀಯ ಶಸ್ತ್ರವೈದ್ಯನ ಸಹಾಯಕನಾಗಿ ಕೆಲಸಮಾಡುತ್ತ ಎರವು ಪಡೆದ ವೈದ್ಯಕೀಯ ಗ್ರಂಥಗಳನ್ನು ಓದುತ್ತ ಕೊನೆಗೆ ಸ್ನೇಹಿತರ ಧನಸಹಾಯದಿಂದ ವೈದ್ಯವಿದ್ಯಾಲಯದಲ್ಲಿ ವ್ಯಾಸಂಗಿಸಿ 1897ರಲ್ಲಿ ವೃತ್ತಿವೈದ್ಯನಾಗುವ ಅರ್ಹತೆ ಪಡೆದ. ಅನಂತರ ಸಾಂಕ್ರಾಮಿಕರೋಗ ಚಿಕಿತ್ಸಾಲಯದಲ್ಲಿ ಕಿಡೋಸ್ಯಾಟೋವಿನ ಸಹಾಯಕನಾಗಿ ನೇಮಕಗೊಂಡು ಹಿಡೆಯೊ (ಅಂದರೆ ಖ್ಯಾತಿವೆತ್ತ) ಎಂಬುದಾಗಿ ಹೆಸರು ಬದಲಿಸಿಕೊಂಡ. ಆ ಕಾಲದಲ್ಲಿ ಅಮೆರಿಕದಿಂದ ಜಪಾನಿಗೆ ವೈದ್ಯಕೀಯ ನಿಯೋಗವೊಂದರ ಮುಖಂಡನಾಗಿ ಆಗಮಿಸಿದ್ದ ಫ್ಲೆಕ್ಸ್ನರ್ ಎಂಬಾತನನ್ನು ಭೇಟಿ ಮಾಡಿ ತಾನು ಉನ್ನತ ವ್ಯಾಸಂಗಕ್ಕೆ ಅಮೆರಿಕಕ್ಕೆ ಬರಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ. ಇದನ್ನು ಉಪಚಾರಕ್ಕಾಗಿ ಅನುಮೋದಿಸಿದ ಫ್ಲೆಕ್ಸ್ನರನ ಮಾತನ್ನೇ ಗಟ್ಟಿಯಾಗಿ ಹಿಡಿದುಕೊಂಡು ಪ್ರಯಾಣ ಖರ್ಚಿಗೂ ಸಾಲ ಮಾಡಿ ಕಾಸಿಲ್ಲದೆ, 1900ರಲ್ಲಿ, ಫ್ಲೆಕ್ಸ್ನರನೇ ಪ್ರಾಧ್ಯಾಪಕನಾಗಿದ್ದ ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯಕ್ಕೆ ನೇರವಾಗಿ ಬಂದಿಳಿದ. ಅಲ್ಲಿ ವೆಯ್ರ್ ಮಿಚೆಲ್ ಎಂಬಾತ ಒದಗಿಸಿದ ತೀರ ಮಿತವೇ ಆಗಿದ್ದ ನೆರವನ್ನು ಪಡೆದು ಫ್ಲೆಕ್ಸ್ನರನ ಕೈಕೆಳಗೆ ಹಾವಿನ ವಿಷವನ್ನು ಕುರಿತು ವ್ಯಾಸಂಗವನ್ನು ಪ್ರಾರಂಭಿಸಿ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಿದ. 1903ರಲ್ಲಿ ಇವನು ಕಾರ್ನೆಗಿ ಸಂಸ್ಥೆಯಲ್ಲಿ ಸಹಾಯಕನಾಗಿ ನೇಮಿಸಲ್ಪಟ್ಟು ಕೋಪನ್‍ಹೇಗನ್ನಿನಲ್ಲಿ ಒಂದು ವರ್ಷಕಾಲ ಅನ್ವೇಷಕ ವ್ಯಾಸಂಗ ನಡೆಸಲು ವೇತನವನ್ನು ಪಡೆದ. ವಿಷ-ಪ್ರತಿವಿಷಗಳ ವ್ಯಾಸಂಗದಲ್ಲಿ ಪ್ರಮಾಣವಾದ ಪರಿಮಾಣ ಹಾಗೂ ಭೌತರಾಸಾಯನಿಕ ತತ್ತ್ವದೃಷ್ಟಿ ಅತಿಮುಖ್ಯವೆಂಬುದು ಇಲ್ಲಿ ಅವನಿಗೆ ಮನದಟ್ಟಾಯಿತು. ಅನಂತರ 1904ರಲ್ಲಿ ಅಮೆರಿಕಕ್ಕೆ ವಾಪಸಾಗಿ ರಾಕ್‍ಫೆಲ್ಲರ್ ಪ್ರತಿಷ್ಠಾನದಲ್ಲಿ ಸಹಾಯಕನಾಗಿ ಸೇರಿದ. ಶೌಡಿನ್ ತೋರಿಸಿದ್ದಂತೆ ಟ್ರಿಪೋನೀಮ ಪ್ಯಾಲಿಡಮ್ ಎಂಬ ಏಕಾಣು ಪರಂಗಿ ರೋಗಕಾರಕವೇ ಸರಿ ಎಂದು 1905ರಲ್ಲಿ ಸ್ಥಿರಪಡಿಸಿದ್ದೇ ಅಲ್ಲದೆ ವಾಸರ್‍ಮನ್ ಮುಂತಾದವರಿಂದ 1906ರಲ್ಲಿ ಕಂಡುಹಿಡಿಯಲ್ಪಟ್ಟ ವಿಶಿಷ್ಟವಾದ ರಕ್ತಪರೀಕ್ಷೆಯ ವಿಷಯವಾಗಿ ಪ್ರಯೋಗಗಳನ್ನು ಮುಂದುವರಿಸಿದ. ಪರಂಗಿರೋಗದ ವಿಷಾಣುಗಳನ್ನು ಪ್ರಯೋಗಾಲಯದಲ್ಲಿ ಕೃಷಿಮಾಡಿ ಬೆಳೆಸಿ ಸಫಲನಾದ. 1909ರಿಂದ 1913ರ ನಡುವೆ ಈ ರೀತಿ ಪರಂಗಿರೋಗ ವ್ಯಾಸಂಗಗಳನ್ನು ಅನೇಕವಾಗಿ ಕೈಗೊಂಡಿದ್ದರೂ ಅವುಗಳಲ್ಲೆಲ್ಲ ಅತಿ ಮುಖ್ಯವಾದುದು ಕೆಲವು ಪರಂಗಿರೋಗಿಗಳ ಅಂತಿಮ ಸ್ಥಿತಿಯಾದ ಚಿತ್ತಗೆಡಿಕೆ ಹಾಗೂ ಸಾರ್ವತ್ರಿಕವಾಗಿ ದೈಹಿಕ ಸ್ವಾಧೀನನಾಶ (ಜನರಲ್ ಪೆರಾಲಿಸಿಸ್ ಆಫ್ ದಿ ಇನ್‍ಸೇನ್-ಜಿ.ಪಿ.ಐ.) ಸ್ಥಿತಿಯಲ್ಲಿ ಅವರ ಮಿದುಳಿನಲ್ಲಿ ಟ್ರಿಪೋನೀಮ ಇರುವುದನ್ನು ತೋರಿಸಿದ್ದು. 1913ರಲ್ಲಿ ನೊಗುಚಿ ಯೂರೊಪಿನಲ್ಲಿ ಪ್ರವಾಸಮಾಡಿ ಪ್ರಯೋಗಯುಕ್ತ ಉಪನ್ಯಾಸಗಳನ್ನು ಕೊಟ್ಟು ಪ್ರಸಿದ್ಧಿ ಪಡೆದ್ದರಿಂದ ವಾಪಸ್ಸು ಬಂದಮೇಲೆ ಅವನಿಗೆ ರಾಕ್‍ಫೆಲ್ಲರ್ ಸಂಸ್ಥೆಯಲ್ಲಿ ಸದಸ್ಯತ್ವ ದೊರೆಯಿತು.
ನೊಗುಚಿಯ ಇನ್ನೊಂದು ಪ್ರಮುಖ ಸಾಧನೆ ಒರೋಯಜ್ವರಕ್ಕೂ ವೆರ್ರುಗಪೆರುಯಾನ ಎಂಬ ಚರ್ಮವ್ಯಾಧಿಗೂ ಇರುವ ಸಂಬಂಧವನ್ನು ಬಗೆಹರಿಸಿದ್ದು. ಇವೆರಡು ರೋಗಗಳ ಕಾರಕವೂ ಬಾರ್ಟೊನೆಲ್ಲ ಬ್ಯಾಸಿಲ್ಲಿಫಾರ್ಮಿಸ್ ಎಂಬ ವಿಷಾಣುವೇ ಎಂದೂ ವಿಷಾಣು ರಕ್ತಗತವಾಗಿ ವ್ಯಾಪಕ ರೋಗವನ್ನು ಉಂಟುಮಾಡಿ ಒರೋಯಜ್ವರಕ್ಕೆ ಕಾರಣವಾಗುತ್ತದೆ ಎಂದೂ ಹಾಗಿಲ್ಲದೆ ಸ್ಥಳೀಯವಾಗಿ ಚರ್ಮದಲ್ಲಿ ನೆಲಸಿ ರೋಗವನ್ನು ಉಂಟುಮಾಡಿದರೆ ವೆರ್ರುಗ ಪೆರಿಯಾನಕ್ಕೆ ಕಾರಣವಾಗುತ್ತದೆಂದೂ ಆತ ವಿಶದಪಡಿಸಿದ. ಪೋಲಿಯೊ, ನಾಯಿಹುಚ್ಚು, ಅರಿಗಣ್ಣು ಮುಂತಾದವುಗಳ ಕಾರಕಗಳಾಗಿರಬಹುದು ಎಂಬ ಸೂಕ್ಷ್ಮವಿಷಾಣುಗಳ ನೂತನ ಕೃಷಿವಿಧಾನಗಳನ್ನೂ ತೋರಿಸಿಕೊಟ್ಟ.

ರೋಗದಿಂದ ನರಳುತ್ತಿದ್ದ ತನ್ನ ತಾಯಿಯನ್ನು ನೋಡಿ ಬರಲು ನೊಗುಚಿ ಜಪಾನಿಗೆ 1915ರಲ್ಲಿ ಬಂದ. ಆಗ ತಾನೇ ವೆಯ್ಲನ ರೋಗಕ್ಕೆ ಕಾರಣ ಸ್ಪೈರೋಕೀಟ ಇಕ್ಟಿ ರೋಹಿಮೊರ್ಹೇಜಿಯೆ ಎಂಬ ಏಕಾಣು ಎಂದು ಇಬ್ಬರು ಜಪಾನಿ ವಿಜ್ಞಾನಿಗಳು ವಿಶದಪಡಿಸಿದ್ದ ವಿಷಯ ಗೊತ್ತಾಯಿತು. ಆ ವಿಷಾಣುಗಳನ್ನು ನೈಸರ್ ಪರೀಕ್ಷೆಗೆ ಒಳಪಡಿಸಿ ಅವಕ್ಕೆ ಲೆಪ್ಟೂಸ್ಪೈರ ಇಕ್ಟಿರೊ ಹೆಮೊರ್ಹೇಜಿಯೆ ಎಂಬ ಬೇರೆ ಹೆಸರು ಕೊಟ್ಟ. ಈಗ ರೂಢಿಯಲ್ಲಿರುವುದು ಇದೇ ಹೆಸರು. ನೊಗುಚಿ ಅಮೆರಿಕಕ್ಕೆ ವಾಪಸ್ಸು ಹೋದ ಬಳಿಕ ದಕ್ಷಿಣ ಅಮೆರಿಕದ ಪೀತಜ್ವರಪೀಡಿತ ಪ್ರಾಂತ್ಯಗಳಿಗೆ ಪ್ರವಾಸ ಹೋಗಿ ರೋಗಕಾರಕದ ಪತ್ತೆಗಾಗಿ ವಿಷಯ ಹಾಗೂ ವಸ್ತುಸಂಗ್ರಹಣೆ ಮಾಡಿಕೊಂಡು ಬಂದದ್ದಲ್ಲದೆ 1919ರಿಂದ 1992ರ ನಡುವೆ ಅನೇಕ ಪ್ರಯೋಗಗಳನ್ನು ಮಾಡಿ ಪೀತಜ್ವರಕಾರಕವೂ ಲೆಪ್ಟೊಸ್ಪೈರಜಾತಿಗೆ ಸೇರಿದ ಒಂದು ವಿಷಾಣು ಎಂದು ಪ್ರಕಟಿಸಿದ. ತಪ್ಪುಕಲ್ಪನೆಯಿಂದ ಪ್ರಾರಂಭಿಸಿ ಕೈಗೊಂಡ ಈ ಪ್ರಯೋಗಗಳಿಂದ ತಿಳಿದುಬಂದ ಈ ತೀರ್ಮಾನವೂ ತಪ್ಪೇ ಆಗಿದ್ದರೂ ರಾಕ್‍ಫೆಲ್ಲರ್ ಸಂಸ್ಧೆ ಮತ್ತು ಅದರಲ್ಲಿ ನೊಗುಚಿಯ ಸ್ಧಾನ ಇವುಗಳಿಂದಾಗಿ ನೊಗುಚಿಯ ಪ್ರಕಟಣೆಯನ್ನು ಶಂಕಿಸಲು ಕಷ್ಟವಾಯಿತು. ಆದರೆ 1942ರ ಹೊತ್ತಿಗೆ ನೊಗುಚಿಯ ಹೇಳಿಕೆ ತಪ್ಪು ಎಂಬುದಾಗಿ ಅನೇಕ ವಿಜ್ಞಾನಿಗಳು ಸಾರಿದರು. ಯಾರು ಸರಿ ಎಂದು ಪುನಃ ತನಿಖೆ ಮಾಡುವಷ್ಟರಲ್ಲಿ ದ. ಅಮೆರಿಕ ಪ್ರಾಂತ್ಯಗಳಿಂದ ಪೀತಜ್ವರ ಮಾಯವಾಗಿ ತನಿಖೆಯನ್ನು ನಿಲ್ಲಿಸಬೇಕಾಯಿತು. ಆದರೆ ಪಶ್ಚಿಮ ಆಫ್ರಿಕದಲ್ಲಿ ಪೀತಜ್ವರ ಕಂಡುಬಂದಿದ್ದು ರೋಗ ವ್ಯಾಸಂಗ ಕ್ಷೇತ್ರ ಅಲ್ಲಿಗೆ ಬದಲಾಯಿತು. ಅಲ್ಲಿ ಅಕ್ರನಗರದಲ್ಲಿ ಪ್ರಯೋಗಗಳನ್ನು ಮುಂದುವರಿಸುತ್ತ, 1927ರಲ್ಲಿ, ಏಡ್ರಿಯನ್ ಸ್ಟೋಕ್ಸ್ ಎಂಬ ವಿಜ್ಞಾನಿ, ಪೀತಜ್ವರಕಾರಕ ಲೆಪ್ಟೊಸ್ಪೈರ ಜಾತಿಗೆ ಸೇರಿದ ಏಕಾಣು ಅಲ್ಲ ಎಂದು ನಿರ್ವಿವಾದವಾಗಿ ತೋರಿಸಿದ. ಆದರೆ ಇದನ್ನು ಪ್ರಕಟಿಸುವಷ್ಟರಲ್ಲಿ ಅವನೇ ಪೀತಜ್ವರ ಪೀಡಿತನಾಗಿ ಮೃತನಾದ. ಕೂಡಲೇ ನೊಗುಚಿ ಪಶ್ಚಿಮ ಆಫ್ರಿಕಕ್ಕೆ ಯಾನಮಾಡಿದ. ಅಕ್ರದಲ್ಲಿ ವೈದ್ಯಕೀಯ ಪರಿಶೋಧನಾ ಸಂಸ್ಧೆಯ ನಿರ್ದೇಶಕ ಯಂಗ್ ಎಂಬವನೊಡನೆ ಸಂಪರ್ಕ ಬೆಳೆಸಿ ಆರು ತಿಂಗಳುಗಳ ಕಾಲ ಸ್ಟೋಕ್ಸ್‍ನ ಪ್ರಯೋಗಗಳನ್ನು ಪುನಃ ಮಾಡಿ ಅವುಗಳ ಫಲಿತಾಂಶಗಳ ಖಚಿತತೆಯನ್ನು ಮನಗಂಡ. ತನ್ನ ಹಿಂದಿನ ಪ್ರಯೋಗ ಫಲಿತಾಂಶಗಳು ಸುಳ್ಳಾದುದು ನೊಗುಚಿಯ ಮನಸ್ಸಿಗೆ ಭಾರಿ ಧಕ್ಕೆಯಾಯಿತು. ಪ್ರಯೋಗಗಳನ್ನು ಮುಗಿಸಿ ಅಮೆರಿಕಕ್ಕೆ ವಾಪಸು ಹೊರಡ ಬೇಕೆಂದಿರುವಷ್ಟರಲ್ಲಿ ನೊಗುಚಿಗೆ ಪೀತಜ್ವರ ತಗುಲಿ ಮೃತನಾದ (21-5-1928). ದುರದೃಷ್ಟವೆಂದರೆ ಯಂಗನೂ ಒಂದು ವಾರದಲ್ಲಿ ಆ ಜ್ವರದಿಂದ ಮಡಿದ. ಪೀತಜ್ವರಕಾರಕದ ಅನ್ವೇಷಣೆಯಲ್ಲಿ ತಾನು ಪರಾಜಿತನಾದದ್ದನ್ನು ಸಹಿಸದೆ ಬೇಕಾಗಿಯೇ ಪೀತಜ್ವರವನ್ನು ಬರಿಸಿಕೊಂಡು ನೊಗುಚಿ ಆತ್ಮಹತ್ಯೆ ಮಾಡಿಕೊಂಡನೇನೋ ಎಂದು ಭಾವಿಸುವವರು ಉಂಟು. ಜಪಾನಿಯರಲ್ಲಿ ಸೋಲಿಗಿಂತ ಆತ್ಮಹತ್ಯೆ ಲೇಸು ಎಂದು ಭಾವನೆ ಸಾಮಾನ್ಯವಾಗಿ ಪ್ರಚಲಿತವಾಗಿರುವುದು ನೊಗುಚಿಯದು ಆತ್ಮಹತ್ಯೆ       ಪ್ರಸಂಗವಿರಬಹುದು ಎನ್ನುವುದಕ್ಕೆ ಪ್ರೇರಣೆ. ಸ್ವತಃ ಜಪಾನೀ ವಿಜ್ಞಾನಿಗಳು ನೊಗುಚಿ ಹೀಗೆ ಆತ್ಮಹತ್ಯೆ ಮಾಡಿಕೊಂಡನೆಂದು ಬಾವಿಸರು. ರೋಗಕಾರಕದ ಅನ್ವೇಷಣೆಯಲ್ಲಿ ತಲ್ಲೀನವಾಗಿದ್ದಾಗ ಅಕಸ್ಮಾತ್ ತಾನೇ ಅದಕ್ಕೆ ತುತ್ತಾದ ವೀರ ಅನ್ವೇಷಕ ನೊಗುಚಿ ಎಂಬುದು ಅವರ ಅಭಿಪ್ರಾಯ.

ಜೀವಿತಕಾಲದಲ್ಲಿ ಉತ್ತಮಮಟ್ಟದ ಏಕಾಣುಜೀವಿಶಾಸ್ತ್ರಜ್ಞನೆಂದು ಪರಿಗಣಿಸಲ್ಪಟ್ಟು ಅನೇಕ ವಿಶ್ವವಿದ್ಯಾಲಯಗಳಿಂದ ಪಾರಿತೋಷಕಗಳನ್ನೂ ನೊಗುಚಿ ಗಳಿಸಿದ. ಪುಟ್ಟ ಆಕಾರದ ಬಹುವಿನೀತ ಭಾವದ ಹಾಗೂ ಆದರಣೀಯ ನಡೆವಳಿಕೆಯಿದ್ದ ಆತ ಬಹು ಜನರ ಮೆಚ್ಚಿಕೆಗೆ ಪಾತ್ರನಾಗಿದ್ದುದು ಆಶ್ಚರ್ಯವಲ್ಲ. ಇದರಿಂದ ಅವನ ವ್ಯಾಸಂಗಗಳಲ್ಲಿನ ತಪ್ಪುಗಳನ್ನು ತೇಲಿಸಿ ಮಾತನಾಡುವುದೂ ಅವನ ಸಾಮಥ್ರ್ಯವನ್ನು ಹಿಗ್ಗಿಸಿ ಹೊಗಳುವುದೂ ಇದ್ದೇ ಇತ್ತು. ವಾಸ್ತವವಾಗಿ ಅವನು ನಿರಂತರ ಶ್ರಮವಹಿಸಿ ಪ್ರಯೋಗಗಳನ್ನು ಮಾಡುತ್ತಿದ್ದುದೇ ಅಲ್ಲದೆ ಫಲಿತಾಂಶಗಳ ಪ್ರಾಮುಖ್ಯವನ್ನು ಚಟ್ಟನೆ ಗ್ರಹಿಸಬಲ್ಲ ಸೂಕ್ಷ್ಮಮತಿಯಾಗಿಯೂ ಇದ್ದ. ಬಹುಚಳಕದಿಂದ ನವ್ಯ ವಿಧಾನಗಳನ್ನು ಅನುಸರಿಸಿ ಪ್ರಯೋಗಗಳನ್ನು ಕೈಗೊಳ್ಳುವುದರಲ್ಲಿ ಅವನು ಸಿದ್ಧಹಸ್ತ. ಆದರೂ ಪ್ರಯೋಗಗಳಿಗಾಗಿ ಬಳಸುತ್ತಿದ್ದ ಸಾಮಗ್ರಿಗಳ ವಿಷಯದಲ್ಲಿ ವಿತರಣೆಯಾಗಲಿ ಮಿತಿಯಾಗಲಿ ಕಾಣಬರುತ್ತಿರಲಿಲ್ಲ ಅಲ್ಲದೆ ಅನೇಕ ವೇಳೆ ವಿನಾಕಾರಣ ಕುಗ್ಗಿದ ಮನಸ್ಸಿನಿಂದ ವ್ಯಾಸಂಗವಿಮುಖನಾಗಿಯೂ ಇರುತ್ತಿದ್ದುದುಂಟು.
	(ಎಸ್.ಆರ್.ಆರ್.; ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ